ಅಲ್ಪಾವಧಿ ಸೇನಾ ನೇಮಕಾತಿ ಯೋಜನೆ ಅಗ್ನಿಪಥ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ತೀವ್ರವಾಗಿದ್ದು, ಇಡೀ ದೇಶವನ್ನು ಆವರಿಸಿಕೊಂಡಿದೆ. ಆರಂಭದಲ್ಲಿ ಉತ್ತರ ಭಾರತಕ್ಕೆ ಸೀಮಿತವಾಗಿದ್ದ ಹೋರಾಟ, ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ, ಪಂಜಾಬ್, ಕರ್ನಾಟಕ, ಕೇರಳದಲ್ಲಿ ಸೇರಿದಂತೆ 21 ರಾಜ್ಯಗಳಿಗೆ ವ್ಯಾಪಿಸಿದೆ. ಎಲ್ಲ ರಾಜ್ಯಗಳಲ್ಲಿ ಬೀದಿಗಿಳಿಯುತ್ತಿರುವ ಸೇನಾ ಆಕಾಂಕ್ಷಿಗಳು ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ನಿನ್ನೆ ತಮಿಳುನಾಡು, ಆಂಧ್ರಪ್ರದೇಶ, ಕೇರಳದಲ್ಲೂ ಪ್ರತಿಭಟನೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಪ್ರವಾಸದಲ್ಲಿರುವ ವೇಳೆಯೇ ಗುಜರಾತ್‍ನಲ್ಲಿ ಅಗ್ನಿಪಥ್ ವಿರುದ್ಧ ಪ್ರತಿಭಟನೆ ನಡೆದಿದೆ. ರಾಜಸ್ಥಾನದಲ್ಲಿ ಅಲ್ವಾರ್‍ನ ಜೈಪುರ-ದೆಹಲಿ ಹೆದ್ದಾರಿಯೂ ಕೆಲಕಾಲ ಜಾಮ್ ಆಗಿತ್ತು. ಬೆಹ್ರೋರ್‍ನಲ್ಲಿ ಯುವಕರು ಸುಮಾರು 15 ನಿಮಿಷಗಳ ಕಾಲ ಹೆದ್ದಾರಿಯನ್ನು ಬಂದ್ ಮಾಡಿದರು. ಪ್ರತಿಭಟನಾಕಾರರು ಬಸ್ಸಿನ ಗಾಜುಗಳನ್ನು ಪುಡಿ ಮಾಡಿದರು. ಇನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಪ್ರಧಾನಿಗೆ ಪತ್ರ ಬರೆದಿದ್ದು, ಅಗ್ನಿಪಥ ಯೋಜನೆಯನ್ನು ಮುಂದೂಡುವಂತೆ ಮತ್ತು ಯುವಕರ ಆತಂಕವನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ಇತ್ತ ರಾಜಸ್ಥಾನ ಸರ್ಕಾರ ಸಾರ್ವಜನಿಕ ಹಿತಾಸಕ್ತಿ ಮತ್ತು ಯುವಕರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಅಗ್ನಿಪಥ ಯೋಜನೆಯನ್ನು ಹಿಂಪಡೆಯಬೇಕು ಎಂಬ ನಿರ್ಣಯವನ್ನು ರಾಜ್ಯ ಸಚಿವ ಸಂಪುಟವು ಸರ್ವಾನುಮತದಿಂದ ಅಂಗೀಕರಿಸಿತು. ಈ ನಡುವೆ ಅಗ್ನಿಪಥ್ ವಿರುದ್ಧ ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಲಿದೆ. ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಯಲಿದ್ದು ಕಾಂಗ್ರೆಸ್‍ನ ಸಿಡಬ್ಲ್ಯೂಸಿ ಸದಸ್ಯರು, ಸಂಸದರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಇನ್ನು ಹೋರಾಟದ ಕೇಂದ್ರ ಬಿಂದುವಾಗಿರುವ ಬಿಹಾರದಲ್ಲಿ ಪ್ರತಿಭಟನೆಗಳ ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. 3 ದಿನಗಳಲ್ಲಿ 130 ಎಫ್‍ಐಆರ್‍ಗಳನ್ನು ದಾಖಲಿಸಲಾಗಿದೆ. ಸುಮಾರು 620 ಜನರನ್ನು ಬಂಧಿಸಲಾಗಿದ್ದು, ನಿನ್ನೆ ಒಂದೇ ದಿನ 140 ಜನರನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟಿರುವ ಪೊಲೀಸ್ ವಾಟ್ಸಾಪ್ ಗುಂಪಿನಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡುವವರು ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ.
#publictv #newscafe #agnipathscheme